ಜೀವನ್ಮುಕ್ತಿ -
ಜೀವಿ ಇಹದಲ್ಲೇ, ಈ ಜನ್ಮದಲ್ಲೇ ಸಶರೀರಿಯಾಗಿಯೇ ಪಡೆಯುವ ಮುಕ್ತಿ. ಮುಕ್ತಿಯನ್ನು ಇಹದಲ್ಲೇ ಪಡೆಯಬಹುದೆಂಬ ಭಾವನೆ ಮೊಟ್ಟಮೊಲಿಗೆ ಕಾಣಿಸಿಕೊಳ್ಳವುದು ಕಠೋಪನಿಷತ್ತಿನಲ್ಲಿ. ಹೃದಯದಲ್ಲಿ ನೆಟ್ಟಿರುವ ಆಸೆಗಳು ವಿನಾಶವಾದಾಗ ಜೀವಿ ಅಮೃತತ್ವವನ್ನು ಹೊಂದುತ್ತಾನೆ. ಇಹದಲ್ಲೇ ಬ್ರಹ್ಮನನ್ನು ಸೇರುತ್ತಾನೆ ಎಂದು ಆ ಉಪನಿಷತ್ತು ಸ್ಪಷ್ಟವಾಗಿ ಹೇಳುತ್ತದೆ. ಈ ಮುಕ್ತಿ ಇತರ ಉಪನಿಷತ್ತುಗಳಲ್ಲಿ ಹೇಳಿರುವ ಕ್ರಮಮುಕ್ತಿಗಿಂತ (ನೋಡಿ- ಕ್ರಮಮುಕ್ತಿ) ಭಿನ್ನ. ಅವೈದಿಕವೆನಿಸಿದ ಜೈನ ಮತ್ತು ಬೌದ್ಧ ದರ್ಶನಗಳಲ್ಲೂ ಇಹದಲ್ಲೇ ಮುಕ್ತಿ ಪಡೆಯಬಹುದೆಂಬ ಭಾವನೆ ಇದೆ. ಆದರೆ ಜೈನರು ಮತ್ತು ಬೌದ್ಧರು ಹೇಳಿರುವ ಮುಕ್ತಿ ಬ್ರಹ್ಮೈಕ್ಯವಲ್ಲ. ಕೇವಲ ಜ್ಞಾನವನ್ನು ಪಡೆದಾಗ ವ್ಯಕ್ತಿ ಇಹದಲ್ಲೇ ಅರ್ಹಂತನಾಗಿ ಮುಕ್ತಿ ಪಡೆಯುತ್ತಾನೆಂದು ಜೈನರು ಹೇಳಿರುತ್ತಾರೆ. ಅಜ್ಞಾನದಿಂದ ಹುಟ್ಟಿದ ತೃಷೆ, ಮತ್ತು ಅದರ ಪರಿಣಾಮವಾದ ಕರ್ಮ ವ್ಯಕ್ತಿಯನ್ನು ಸಂಸಾರದಲ್ಲಿ ಸಿಕ್ಕು ತೊಳಲಿ ಬಳಲುವಂತೆ ಮಾಡುತ್ತದೆ. ಜ್ಞಾನದಿಂದ ತೃಷೆ ಇಂಗಿದಾಗ ಒಬ್ಬನು ಪುನರ್ಜನ್ಮವಿಲ್ಲದೆ ನಿರ್ವಾಣವೆಂಬ ಮುಕ್ತಿದೆಶೆಯನ್ನು ಇಹದಲ್ಲೇ ಪಡೆಯುತ್ತಾನೆಂದು ಬೌದ್ಧರು ಭಾವಿಸುತ್ತಾರೆ. ಇಷ್ಟಾದರೂ ಇಹದಲ್ಲೇ ಪಡೆಯುವ ಈ ಮುಕ್ತಿಯನ್ನು ಜೀವನ್ಮುಕ್ತಿ ಎಂದು ಇವರು ಕರೆದಿಲ್ಲ. ಈ ಪಾರಿಭಾಷಿಕ ಪದ ವಿಶೇಷವಾಗಿ ಪ್ರಚಾರಕ್ಕೆ ಬರಲು ಶಂಕರಾಚಾರ್ಯರು ಮುಖ್ಯ ಕಾರಣರು. ಈ ವಿಷಯವನ್ನೇ ಒಂದು ಪ್ರಧಾನ ವಿಷಯವನ್ನಾಗಿ ಮಾಡಿಕೊಂಡು ಜೀವನ್ಮುಕ್ತಿವಿವೇಕ ಎಂಬ ಒಂದು ಉತ್ಕøಷ್ಟ ಗ್ರಂಥವನ್ನು ಶಂಕರಾಚಾರ್ಯರ ಅನುಯಾಯಿಗಳಾದ ವಿದ್ಯಾರಣ್ಯರು ರಚಿಸಿದರು.

ಶಂಕರಾಚಾರ್ಯರ ಜೀವನ್ಮುಕ್ತಿ ಭಾವನೆಗೆ ಅದ್ವ್ಯೆತತತ್ವ ಆಧಾರ. ಪರಬ್ರಹ್ಮದಿಂದ ಭಿನ್ನವಲ್ಲ ತಾನು ಎಂಬ ಜ್ಞಾನವನ್ನು ಪಡೆದಾಗ ಜೀವಾತ್ಮ ಇಹದಲ್ಲೇ ಮೋಕ್ಷ ಪಡೆಯಬಹುದು. ಜೀವಾತ್ಮ ಪರಮಾತ್ಮ ಭಿನ್ನವಲ್ಲ ಎಂದರೆ ಅವೆರಡೂ ಒಂದೇ ಎಂದು ಭಾವಿಸಕೂಡದು. ಅದ್ವೈತಿಗಳಾದ ನಾವು ಜೀವಾತ್ಮ ಮತ್ತು ಪರಮಾತ್ಮ ಒಂದು ಎಂದು ಹೇಳುವುದಿಲ್ಲ. ಆದರೆ ಭೇದವನ್ನು ನಿರಾಕರಿಸುತ್ತೇವೆ ಎಂದು ಅದ್ವೈತಿಯಾದ ವಾಚಸ್ಪತಿ ಹೇಳುತ್ತಾನೆ. ಒಂದು ತೊಟ್ಟು ನೀರೇ ಸಮುದ್ರವಲ್ಲ. ಆದರೂ ಸಮುದ್ರಕ್ಕೂ ಆ ನೀರಿನ ತೊಟ್ಟಿಗೂ ಅಂತಿಮದಲ್ಲಿ ಭೇದವಿಲ್ಲ. ಸಮುದ್ರದಿಂದ ಎದ್ದ ಹಬೆ, ಹಬೆಯಿಂದ ಕೂಡಿದ ಮೋಡ, ಮೋಡದಿಂದ ಬಿದ್ದ ಹನಿಗಳು, ಎತ್ತರವಾದ ಹಿಮವತ್ಪರ್ವತದ ಮೇಲೆ ಬಿದ್ದ ಮಳೆಯ ಮಂಜುಗಡ್ಡೆ, ಮಂಜುಗಡ್ಡೆ ಕರಗಿ ಹರಿದ ಗಂಗಾನದಿ, ಇವುಗಳದ್ದು ನಾಮರೂಪಭೇದ. ಇವು ವ್ಯಾವಹಾರಿಕ ಭೇದಗಳು. ಪಾರಮಾರ್ಥಿಕವಾಗಿ ಒಂದು ತೊಟ್ಟು ನೀರಿಗೂ ಸಮುದ್ರಕ್ಕೂ ಭೇದವಿಲ್ಲ. ಅಂತಿಮದಲ್ಲಿ ಎಲ್ಲ ನೀರಿನ ತೊಟ್ಟುಗಳೂ ನದಿಗಳ ಮೂಲಕ ಸಮುದ್ರದಲ್ಲಿ ಸೇರಿಹೋಗುತ್ತವೆ. ಹಾಗೆಯೇ ಜೀವಾತ್ಮರುಗಳಿಗಿರುವ ಭೇದ ಕೇವಲ ವ್ಯಾವಹಾರಿಕವಾದ್ದು; ಪಾರಮಾರ್ಥಿಕವಾಗಿ ಭೇದವಿಲ್ಲ. ಅವು ಪರಮಾತ್ಮದಿಂದ ಅಭಿನ್ನ. ಜೀವಾತ್ಮವೂ ಪರಮಾತ್ಮವೂ ಅಂತಿಮದಲ್ಲಿ ಅಭಿನ್ನ ಎಂಬ ಸತ್ಯ ಸುಲಭಗೋಚರವಲ್ಲ. ಅದಕ್ಕೆ ನಿತ್ಯಾನಿತ್ಯವಿವೇಕ, ಐಹಿಕ ಮತ್ತು ಸ್ವರ್ಗಸುಖದಲ್ಲಿ ವೈರಾಗ್ಯ, ಶಮದಮಾದಿಗಳ ಸಾಧನೆ, ದೀರ್ಘಕಾಲದ ಧ್ಯಾನ ಮತ್ತು ಸಮಾಧಿಸಾಧನೆ ಅಗತ್ಯ. ಈ ಎಲ್ಲ ಸಾಧನಗಳು ಸಾಂಗವಾಗಿ ನೆರವೇರಿದಾಗ ಮುಮುಕ್ಷುವಿಗೆ ಅಭೇದ ತತ್ವದ ಸಾಕ್ಷಾತ್ಕಾರವಾಗುತ್ತದೆ. ಆ ಸಾಕ್ಷಾತ್ಕಾರವೇ ಜೀವನ್ಮುಕ್ತಿ. ಆ ಸಾಕ್ಷಾತ್ಕಾರ ಪಡೆದವ ಶರೀರಿಯಾಗಿದ್ದರೂ ಅವನನ್ನು ಭೇದ ಬಾಧಿಸುವುದಿಲ್ಲ, ಬಂಧಿಸುವುದಿಲ್ಲ. ಭೇದಕ್ಕೆ ಕಾರಣವಾದ ಅಹಂಕಾರ ಸಂಪೂರ್ಣವಾಗಿ ನಾಶವಾಗಿರುತ್ತದೆ. ಅಹಂಕಾರನಾಶವೇ ಅಂತಿಮ ಗತಿ. ಅವನತಿರೇವ ಗತಿಃ.							(ಜಿ.ಎಚ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ